ಮೋಧೇರ ವಾಸ್ತುಶಿಲ್ಪ - 
 	ಭಾರತದ ಗುಜರಾತ್ ರಾಜ್ಯದ ಮೆಹೆಸಾನಾ ಜಿಲ್ಲೆಯಲ್ಲಿ ಮೆಹೆಸಾನಾದಿಂದ ಸು. 50 ಕಿ.ಮೀ. ದೂರದಲ್ಲೂ ಅಹಮದಾಬಾದಿನಿಂದ 106 ಕಿ.ಮೀ. ದೂರದಲ್ಲೂ ಇರುವ ಮೋಧೇರ (ಮೋಢೇರ) ಎಂಬ ಸ್ಥಳ ಈಗ ಕುಗ್ರಾಮವಾಗಿದ್ದರೂ ಇಲ್ಲಿಯ ಸುಂದರ ಸೂರ್ಯದೇವಾಲಯದಿಂದ ಜಗತ್ಪ್ರಸಿದ್ಧವಾಗಿದೆ. ದೇವಾಲಯದ ಆವರಣದಲ್ಲಿ ದೊರೆತ ಒಂದು ಶಾಸನದ ಆಧಾರದಿಂದ 1026-27ರಲ್ಲಿ ಗುಜರಾತಿನ ಸೋಳಂಕಿ (ಚಾಳುಕ್ಯ) ಶಾಖೆಯ ಪ್ರಖ್ಯಾತ ದೊರೆ ಒಂದನೆಯ ಭೀಮನ ಕಾಲದಲ್ಲಿ ಈ ದೇವಾಲಯ ನಿರ್ಮಿಸಲ್ಪಟ್ಟಿತೆಂದು ತಿಳಿದು ಬರುತ್ತದೆ. ಆದರೆ ಯಾರು ನಿರ್ಮಿಸಿದರೆಂದು ಶಾಸನ ತಿಳಿಸುವುದಿಲ್ಲ. ಕೋಣಾರ್ಕ, ಮಾರ್ತಾಂಡ ಇತ್ಯಾದಿ ಸೂರ್ಯದೇವಾಲಯಗಳಂತೆಯೇ ಈ ದೇವಾಲಯ ಕೂಡ ಶಿಥಿಲವಾಗಿದೆ. ದೇವಾಲಯದ ಮುಖ್ಯಭಾಗವಾದ ಶಿಖರ, ಗೂಢಮಂಟಪದ ಮುಂಭಾಗ, ಸಭಾ ಮಂಟಪದ ಮೇಲ್ಚಾವಣಿ, ಕೀರ್ತಿತೋರಣಗಳು ನಾಶವಾಗಿವೆ.

	ಪೂರ್ವಾಭಿಮುಖವಾಗಿರುವ ಈ ದೇವಾಲಯದ ಮುಖ್ಯ ಭಾಗಗಳೆಂದರೆ ಗರ್ಭಗೃಹ, ಪ್ರದಕ್ಷಿಣ ಪಥ, ಗೂಢಮಂಟಪ-ಇವಿಷ್ಟೂ ಸೇರಿ ಒಂದು ಭಾಗ. ಇದರ ಮುಂಭಾಗದಲ್ಲಿ ಸಭಾಮಂಟಪ ಅಥವಾ ನೃತ್ಯಮಂಟಪವಿದೆ. ದೇವಾಲಯವನ್ನು ವಿನ್ಯಾಸ ಮಾಡಿದ ಶಿಲ್ಪಿ ಅಪೂರ್ವ ಪ್ರತಿಭಾವಂತನಾಗಿರಬೇಕು. ದೇವಾಲಯದ ಪ್ರತಿಯೊಂದು ಭಾಗವನ್ನೂ ಅದರ ಪರಿಸರವನ್ನೂ ಸುಂದರವಾಗಿ ರೂಪಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ದೊಡ್ಡದಾದ ಒಂದು `ಕುಂಡ್ ಅಥವಾ ಕಲ್ಯಾಣಿ ಇದೆ. ಇದನ್ನು ಈಗ ರಾಮಕುಂಡ್ ಎಂದು ಕರೆಯುತ್ತಾರೆ. ದೇವಾಲಯದ ನಿತ್ಯ ವಿಧಿಗಳಿಗೆ, ಯಾತ್ರಾರ್ಥಿಗಳಿಗೆ ನೀರನ್ನು ಒದಗಿಸುವ ಈ ಕಲ್ಯಾಣಿ ಒಂದು ಅಪೂರ್ವ ವಾಸ್ತುಕೃತಿ. ಚೌಕಾಕಾರದ ಈ ಕಲ್ಯಾಣಿಗೆ ನಾಲ್ಕೂ ದಿಕ್ಕಿನಲ್ಲಿ ವಿಶಾಲವಾದ ಸೋಪಾನಗಳಿವೆ. ಸೋಪಾನದ ಮಧ್ಯದಲ್ಲಿ ಸಣ್ಣ ಪಥಗಳೂ ಮತ್ತು ನಿರ್ದಿಷ್ಟ ಅಂತರಗಳಲ್ಲಿ ಸಣ್ಣ ಗುಡಿಗಳೂ ಅವುಗಳ ಮೇಲೆ ವಿಭಿನ್ನ ರೀತಿಯ ಶಿಖರಗಳೂ ಇವೆ. ಕಲ್ಯಾಣಿಯ ನೀರಿನಲ್ಲಿ ಸೂರ್ಯದೇವಾಲಯದ ಸಭಾಮಂಟಪದ ಬಿಂಬ ಸುಂದರವಾಗಿ ಪ್ರತಿಫಲನಗೊಳ್ಳುವಂತೆ ಯೋಜಿಸಲಾಗಿದೆ.

	ಕಲ್ಯಾಣಿಯ ಪಶ್ಚಿಮಕ್ಕೆ ಎತ್ತರ ಹಾಗೂ ವಿಶಾಲವಾದ ಒಂದು ಜಗಲಿ ಇದೆ. ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಿ, ಹೊರಮೈಗೆ ಕಲ್ಲುಚಪ್ಪಡಿ ಹೊದಿಸಿರುವ ಜಗಲಿಯ ಸುತ್ತಲೂ ವಿವಿಧಾಕೃತಿಯ ದಿಂಡುಗಳ ಅಲಂಕರಣೆಯಿದೆ. ಕಲ್ಯಾಣಿಯ ಪಶ್ಚಿಮದ ಕಡೆಯಿಂದ ಈ ಜಗಲಿಯ ಮೇಲಕ್ಕೆ ವಿಶಾಲವಾದ ಸೋಪಾನವೊಂದು ದಾರಿಯನ್ನು ಕಲ್ಪಿಸುತ್ತದೆ. ಜಗಲಿಯ ಮೇಲ್ಭಾಗದಲ್ಲಿ ಮತ್ತು ಈ ಸೋಪಾನದ ತುದಿಯಲ್ಲಿ ಸಾಲಂಕೃತ ತೋರಣವಿದೆ. ಸಾಕಷ್ಟು ದಪ್ಪವೂ ಎತ್ತರವೂ ಆದ ಈ ಎರಡು ಸ್ತಂಭಾಕೃತಿಗಳು ಕಮಾನಿನಾಕಾರದ (ಈಗ ನಾಶವಾಗಿರುವ) ತೋರಣವೊಂದನ್ನು ಹೊತ್ತಿದ್ದವು. ಅರೆಗೊಳವಿಯಲಂಕರಣದ, ಮೆಟ್ಟಲು ಮೆಟ್ಟಲಾಗಿ ಚಿಕ್ಕದಾಗುತ್ತ ಮೇಲೇರುವ ಮತ್ತು ಇತರ ವಿವಿಧಾಲಂಕರಣವನ್ನು ಹೊಂದಿರುವ ದಿಂಡುಳ್ಳ ಕಂಬಗಳು ಮತ್ತು ಮೇಲಿನ ತೋರಣ ವೈಭವಯುತವಾದ ಈ ದೇಗುಲಕ್ಕೆ ಯುಕ್ತ ರೀತಿಯ ಸ್ವಾಗತವನ್ನು ಕೋರುತ್ತಿದ್ದವು. ಇವುಗಳನ್ನು ಕೀರ್ತಿಸ್ತಂಭಗಳೆಂದೂ ಕರೆಯುತ್ತಾರೆ. ಈ ಕೀರ್ತಿತೋರಣಗಳು ಅಥವಾ ಸ್ತಂಭಗಳು ಗುಜರಾತಿನ ದೇವಾಲಯಗಳ ಒಂದು ಮುಖ್ಯ ಅಂಗವಾಗಿದ್ದವು. ಈ ತೋರಣಗಳಿಗೆ ತಕ್ಕಡಿಯನ್ನು ಕಟ್ಟಿ ದೊರೆಗಳು ಸುವರ್ಣ ತುಲಾಭಾರವನ್ನು ನಡೆಸುತ್ತಿದ್ದರೆಂದು ಪ್ರತೀತಿ.

	ಜಗತಿಯ ಮಧ್ಯಭಾಗದಲ್ಲಿ ಸೂರ್ಯದೇವಾಲಯವನ್ನು ನಿರ್ಮಿಸಲಾಗಿದೆ. ಪೂರ್ವ ತುದಿಯಲ್ಲಿ ವಿಶಾಲವಾದ ಮತ್ತು ಸುತ್ತಲೂ ತೆರದ ಸಭಾಮಂಟಪವಿದೆ. ಇದರಿಂದ ಬೇರೆಯಾಗಿ ಸ್ವಲ್ಪ ಅಂತರದಲ್ಲಿ ಗೂಡಮಂಟಪ ಮತ್ತು ಗರ್ಭಗೃಹ ಸೇರಿರುವ ಬಿಂದುಭಾಗವಿದೆ. ಒಂದೇ ಅಕ್ಷದ ಮೇಲಿರುವ ಈ ಭಾಗಗಳೆಲ್ಲ ಕೂಡಿ ಒಟ್ಟು 145 ಅಡಿ ಉದ್ದವಿದೆ. ಅಲಂಕರಣದ ದೃಷ್ಟಿಯಿಂದ ಸುತ್ತಲೂ ತೆರೆದ ಸಭಾಮಂಟಪ ಒಂದು ವಿಧದಲ್ಲಿ ಶೋಭಿಸಿದರೆ, ಅದರಿಂದ ಬೇರೆಯಾಗಿ ನಿರ್ಮಿತವಾಗಿರುವ ಮತ್ತು ಸುತ್ತಲೂ ಮುಚ್ಚಿಕೊಂಡಿರುವ ಗೂಢಮಂಟಪ ಮತ್ತು ಗರ್ಭಗೃಹ ಮತ್ತೊಂದು ರೀತಿಯಲ್ಲಿ ಶೋಭಿಸುತ್ತದೆ. ಈ ಎರಡೂ ಭಾಗಗಳು ವಿಭಿನ್ನ ರೀತಿಯಲ್ಲಿ ನಿರ್ಮಿತವಾಗಿದ್ದರೂ ಏರು ವಿನ್ಯಾಸದಲ್ಲಿ ಕಾಣುವ ಪಟ್ಟರ್ಕೆಗಳು, ಸಾಲುಶಿಲ್ಪಗಳು, ದಿಂಡುಗಳು, ಕಪೋತ, ಪ್ರಸ್ತರು ಇವುಗಳ ವಿನ್ಯಾಸದ ಕೌಶಲದಿಂದ ಎರಡೂ ಕಟ್ಟಡಗಳೂ ಒಂದಕ್ಕೊಂದು ಪೂರಕವಾಗಿರುವಂತೆ ಕಂಡುಬರುತ್ತವೆ.

	ಸೀತೆಯ ಚಾವಡಿ, ಕಲ್ಯಾಣಮಂಡಪ, ನೃತ್ಯಮಂಟಪ ಇತ್ಯಾದಿ ಹೆಸರುಗಳಿಂದ ಕರೆಯಲಾಗುವ ಸಭಾಮಂಟಪ ದಕ್ಷಿಣೋತ್ತರವಾಗಿ 85 ಅಡಿ ಇರುವ ದೀರ್ಘ ಚತುರಸ್ರಾಕಾರದ ಹಜಾರ. ನಾಲ್ಕು ಮುಖಗಳಲ್ಲಿಯೂ ದ್ವಾರಗಳನ್ನು ಹೊಂದಿದ್ದು ದ್ವಾರಗಳ ಪಾಶ್ರ್ವ ಗೋಡೆಗಳು ಸಮಾನಾಂತರದಲ್ಲಿ ಹಿಂಬಣಿಗಳನ್ನು ಹೊಂದಿರುವುದರಿಂದ, ಹಜಾರಕ್ಕೆ ನಕ್ಷತ್ರಾಕಾರದ ತಳವಿನ್ಯಾಸವಿರುವಂತೆ ಭಾಸವಾಗುತ್ತದೆ. ಮಂಟಪದ ಒಳಭಾಗದಲ್ಲಿ ಕಂಬದ ಎರಡು ಸಾಲುಗಳನ್ನು ದಕ್ಷಿಣೋತ್ತರವಾಗಿ, ಎರಡು ಸಾಲುಗಳನ್ನು ಪೂರ್ವ ಪಶ್ಚಿಮವಾಗಿ ದ್ವಾರಗಳ ನೇರದಲ್ಲಿ ನಿಲ್ಲಿಸಿರುವುದರಿಂದ ತಳಪಾಯ ಶಿಲುಬೆಯಾಕಾರವಾಗಿ ಕಾಣುತ್ತದೆ. ತೆರೆದ ಸಭಾಮಂಟಪದ ಸುತ್ತಲೂ ಕಕ್ಷಾಸನದ ವ್ಯವಸ್ಥೆ ಇದೆ.

	ಏರು ವಿನ್ಯಾಸದಲ್ಲಿ ಸೊಗಸಾಗಿ ಕಾಣುವ ಈ ಸಭಾಮಂಟಪದ ಅಧಿಷ್ಠಾನದಲ್ಲಿ ಸಾಲಂಕೃತ ದಿಂಡುಗಳು, ಸಾಲುಶಿಲ್ಪಗಳು ಕಂಡುಬರುತ್ತವೆ. ಅಧಿಷ್ಠಾನದ ಪೀಠದಲ್ಲಿ ಪಟ್ಟಿಶಿಲ್ಪಗಳನ್ನು ಶಾಸ್ತ್ರೋಕ್ತವಾದ ರೀತಿಯಲ್ಲಿ ಕಂಡರಿಸಲಾಗಿದ್ದು ಕೆಳಗಿನಿಂದ ಮೇಲಕ್ಕೆ ಗರಸ್ವತಿಗಳನ್ನು (ಕೀರ್ತಿಮುಖಗಳು) ಹೊಂದಿವೆ. ಇವುಗಳ ಮೇಲೆ ಅಧಿಷ್ಠಾನದ ದಿಂಡುಗಳನ್ನು ಬಲಿಷ್ಠ ರೀತಿಯಲ್ಲಿ ನಿರೂಪಿಸಲಾಗಿದೆ. ಅಧಿಷ್ಠಾನದ ಮೇಲ್ಭಾಗದಲ್ಲಿ ಸುತ್ತಲೂ ಸಣ್ಣದಾದ ಕೈಪಿಡಿಗೋಡೆಯನ್ನು ನಿರ್ಮಿಸಿ, ಕಕ್ಷಾಸನಕ್ಕೆ ಪೀಠವನ್ನಾಗಿ ಮಾಡಿ, ಮೇಲೆ ಆಸನದ ಹಿಂಭಾಗದ ಒರಗು ಚಪ್ಪಡಿಗಳನ್ನು ಕೂಡಿಸಲಾಗಿದೆ. ಈ ಹಿಂಭಾಗ ಹೊರವಲಯದಲ್ಲಿ ಮನೋಹರ ಶಿಲ್ಪಗಳಿಂದಲೂ ವಾಸ್ತು ಅಲಂಕರಣಗಳಿಂದಲೂ ರೇಖಾ ವಿನ್ಯಾಸಗಳಿಂದಲೂ ಶೋಭಿತವಾಗಿದೆ. ನಾಲ್ಕು ದ್ವಾರಗಳ ಇಕ್ಕೆಲಗಳಲ್ಲಿ ಮತ್ತು ಮಂಟಪದ ಒಳಭಾಗದಲ್ಲಿ ಪೂರ್ಣ ಪ್ರಮಾಣದ ಕಂಬಗಳು ಮತ್ತು ಕಕ್ಷಾಸನಗಳ ಮೇಲೆ ಅರ್ಧ ಪ್ರಮಾಣದ ಸ್ತಂಭಗಳೂ ಕಮಾನಿನಾಕಾರದ ತೋರಣಗಳನ್ನು ಹೊತ್ತು ನಿಂತಿರುವ ಕಂಬಗಳೂ ಮಂಟಪದ ಮಧ್ಯದ ಅಂಕಣದ ಸುತ್ತಲೂ ಇವೆ. ಈ ತೋರಣಗಳು ಸೂಕ್ಷ್ಮ ಕೆತ್ತನೆಯಲ್ಲಿ, ಅಲಂಕರಣೆಯ ವೈವಿಧ್ಯದಲ್ಲಿ ಅಬು ಬೆಟ್ಟದ ಮೇಲಿರುವ ಅಮೃತಶಿಲೆಯ ನಯಗಾರಿಕೆಯನ್ನು ನೆನಪುಮಾಡಿಕೊಡುತ್ತವೆ. ಈಗ ಕೇವಲ ದಕ್ಷಿಣದ್ವಾರದ ತೋರಣ ಮಾತ್ರ ಉಳಿದಿದೆ.

	ಸಭಾಮಂಟಪದ ಎಲ್ಲ ಕಂಬಗಳೂ ಮೇಲಿನಿಂದ ಕೆಳಗಿನವರೆಗೆ ಸುಂದರ ಕೆತ್ತನೆಯ ಸೂಕ್ಷ್ಮ ಅಲಂಕರಣಗಳಿಂದ ಕೂಡಿವೆ. ದುಂಡಾಗಿರುವಂತೆ ಕಾಣಿಸುವ ಕಂಬದ ದಿಂಡನ್ನು ಅಡ್ಡಡ್ಡವಾಗಿ ಅನೇಕ ವಲಯಗಳನ್ನಾಗಿ ವಿಂಗಡಿಸಿ, ಪ್ರತಿಯೊಂದು ವಲಯದಲ್ಲೂ ಒಂದಿಂಚೂ ಬಿಡದೆ ನಾಜೂಕಾದ ಕೆತ್ತನೆಗಳನ್ನು ಮಾಡಲಾಗಿದೆ. ವಿವಿಧಾಕಾರದ ಸಣ್ಣಸಣ್ಣ ಅಲಂಕೃತ ದಿಂಡುಗಳು, ಪಟ್ಟಿಕೆಗಳು, ಮಣಿಮಾಲೆಗಳು, ರೇಖಾಚಿತ್ರಗಳು, ವಾಸ್ತು ಅಲಂಕರಣಗಳು, ಅಪ್ಸರೆಯರು, ನರ್ತಕಿಯರು, ವಾದ್ಯಪಟುಗಳು, ಕೀರ್ತಿಮುಖಗಳು ಮತ್ತು ಇನ್ನೂ ಅನೇಕ ಕಥಾನಕಗಳು ಇತ್ಯಾದಿ ಅನೇಕ ವಸ್ತು ವಿಷಯಗಳ ಚಿತ್ರಣವನ್ನು ಈ ಸ್ತಂಭಗಳಲ್ಲಿ ಕಾಣಬಹುದು. ಇವುಗಳಲ್ಲಿ ಮುಖ್ಯವಾದ ಹಾಗೂ ಆಕರ್ಷಣೀಯ ಭಾಗವೆಂದರೆ ಕಣ್ಣಿನ ನೇರದಲ್ಲಿ ಅನಾಯಾಸವಾಗಿ ಕಾಣುವಂತೆ ಚಿತ್ರಿಸಲಾದ ಅರ್ಧ ನೈಜಾಕಾರದ ಅಪ್ಸರೆಯರ ಸುಂದರ ಶಿಲ್ಪಗಳು. ಒಬ್ಬೊಬ್ಬ ಅಂಗನೆಯೂ ಒಂದೊಂದು ಭಂಗಿಯಲ್ಲಿ ನರ್ತಿಸುತ್ತಿರುವಂತೆ, ಅಲಂಕಾರ ಮಾಡಿಕೊಳ್ಳುತ್ತಿರುವಂತೆ ಅನೇಕ ಮನಮೋಹಕ ಭಂಗಿಗಳನ್ನು ಕಂಡರಿಸಲಾಗಿದೆ. ಪ್ರತಿಯೊಂದು ಸ್ತ್ರೀಶಿಲ್ಪವೂ ಶಿಲ್ಪಿಯ ಕಲಾ ಪ್ರೌಢಿಮೆಯನ್ನೂ ಕಲಾಭಿಜ್ಞತೆಯನ್ನೂ ಕಲ್ಪನಾಶಕ್ತಿಯನ್ನೂ ಪ್ರತಿಬಿಂಬಿಸುತ್ತದೆ.

	ಸಭಾಮಂಟಪದ ಮಧ್ಯದ ಅಂಕಣ ಅಷ್ಟಕೋನಾಕಾರವಾಗಿದ್ದು ಉಳಿದ ಎಲ್ಲ ಅಂಕಣಗಳಿಗಿಂತಲೂ ವಿಶಾಲವಾಗಿದೆ. ಇದು ಮೇಲ್ಭಾಗದಲ್ಲಿ ಎತ್ತರವಾದ, ಗುಮ್ಮಟಾಕಾರದ ಭುವನೇಶ್ವರಿಯನ್ನು ಹೊಂದಿತ್ತು. ಈಗ ನಾಶವಾಗಿರುವ ಈ ಭುವನೇಶ್ವರಿ ದೇವಾಲಯದ ಅತ್ಯಂತ ಆಕರ್ಷಣೀಯ ಭಾಗವಾಗಿತ್ತು ಎಂಬುದು ಇಲ್ಲಿ ದೊರೆತಿರುವ ವಾಸ್ತು ಅವಶೇಷಗಳಿಂದಲೂ ಮತ್ತು ಅದಕ್ಕೆ ಹೊಂದಿಕೊಂಡಂತೆ ಈಗಲೂ ಇರುವ ಪ್ರಸ್ತರದ ವಿಶೇಷ ಅಲಂಕರಣೆಯಿಂದಲೂ ತಿಳಿದುಬರುತ್ತದೆ. ಭುವನೇಶ್ವರಿಯನ್ನು ಹೊತ್ತಿದ್ದ ಈ ಕಂಬಗಳ ಮೇಲ್ಭಾಗಗಳು ವಿಶೇಷ ರೀತಿಯವಾಗಿವೆ. ಕಂಬದ ಮೇಲೆ ತೋರಣಗಳಿಗೆ ಆಧಾರವಾಗಿ ಚಾಚುಪೀಠಗಳನ್ನು ಕೂಡಿಸಲಾಗಿದೆ. ಈ ಪೀಠದ ಮೇಲ್ಭಾಗದಲ್ಲಿ ಕಂಬದ ದಿಂಡು ಇನ್ನೂ ಸ್ವಲ್ಪ ಎತ್ತರ ಮುಂದುವರಿದು ಇನ್ನೊಂದು ಸಾಲು ಚಾಚು ಪೀಠಬೋದಿಗೆಯನ್ನು ಹೊಂದಿದ್ದು ಅದರ ಮೇಲೆ ಭುವನೇಶ್ವರಿಯನ್ನು ನಿರ್ಮಿಸಿರುವುದು ಈ ದೇವಾಲಯದ ವೈಶಿಷ್ಟ್ಯ. ಅಟ್ಟದ ಮಾದರಿಯ ಇಂತಹ ಮೇಲಿನ ಕಂಬಸಾಲು ಮತ್ತು ಮೇಲಿನ ಭುವನೇಶ್ವರಿ ವಿವಿಧರೀತಿಯ ಕೆತ್ತನೆಗಳಿಂದಾಗಿ ಶಿಲ್ಪಿಯ ಚಾತುರ್ಯವನ್ನು ಮಂಟಪದ ವೈಭವವನ್ನೂ ನಿರೂಪಿಸುವುದಲ್ಲದೆ ತನ್ನ ಅಸದೃಶ ಸೌಂದರ್ಯದಿಂದ ವೀಕ್ಷಕನನ್ನು ವಿಸ್ಮಯಗೊಳಿಸುತ್ತದೆ. ಈ ರೀತಿಯ ಕಂಬಸಾಲು ಸಮಕಾಲೀನ ಪಶ್ಚಿಮಭಾರತದ ದೇವಾಲಯಗಳಲ್ಲಿ ಕಂಡುಬರುವುದು ಸಾಮಾನ್ಯ. ಇವುಗಳಿಂದಾಗಿ ಮಧ್ಯದ ಹಾಗೂ ಮುಖ್ಯ ಭುವನೇಶ್ವರಿಯನ್ನು ಸುತ್ತಲಿನವುಗಳಿಗಿಂತ ಎತ್ತರದಲ್ಲಿರಿಸಲು ಅನುಕೂಲವಾಗುವುದಲ್ಲದೆ ಶಿಲ್ಪಿಯ ಚಾತುರ್ಯ ಪ್ರದರ್ಶಿಸುವಲ್ಲಿಯೂ ದೇವಾಲಯದ ವೈಭವವನ್ನು ವರ್ಧಿಸುವಲ್ಲಿಯೂ ಸಹಾಯಕವಾಗಿದೆ.

	ಸಭಾಮಂಟಪದ ಹೊರಭಾಗದಲ್ಲಿ ಕಾಣುವ ಪ್ರಸ್ತರ ಭಗ್ನವಾಗಿದ್ದರೂ ಸುಂದರವಾದ ನೋಟವನ್ನು ಕೊಡುತ್ತದೆ. ಈ ಭಾಗದಲ್ಲಿ ಅಲಂಕಾರಿಕ ಕೆತ್ತನೆಗಳುಳ್ಳ ಒಂದರಮೇಲೊಂದರಂತೆ ಮೂರು ಪಟ್ಟಿಕೆಗಳು, ಕೆಳಭಾಗದಲ್ಲಿ ಚಪ್ಪಡಿಯಿಂದ ಮಾಡಿದ ಇಳಿಜಾರಾದ ವಿಸ್ತಾರವಾದ ಹಾಗೂ ಭಗ್ನವಾದ ಕಪೋತವಿದೆ. ಮೇಲಿನ ಕೈಪಿಡಿ ಗೋಡೆ ಹೆಚ್ಚುಕಡಿಮೆ ನಾಶವಾಗಿದೆ.

	ದೇವಾಲಯದ ಮುಖ್ಯಭಾಗವಾದ ಗೂಢಮಂಟಪ ಮತ್ತು ಗರ್ಭಗೃಹ ಸಭಾಮಂಟಪದ ಪಶ್ಚಿಮದ್ವಾರದ ಮುಂದಿವೆ. ಗೂಢಮಂಟಪದ ಮುಂಭಾಗದಲ್ಲಿ ಒಂದು ಮುಖಮಂಟಪವಿದೆ. ಮುಂಭಾಗದಲ್ಲಿ ಎರಡು ಸಾಲಂಕೃತ ಕಂಬಗಳನ್ನು ಹೊಂದಿರುವ ಈ ಮುಖಮಂಟಪದ ಮೇಲ್ಚಾವಣಿ ನಾಶವಾಗಿದೆ. ಗೂಢಮಂಟಪದ ದ್ವಾರಬಂಧ ಒಂದು ಸುಂದರ ಕಲಾಕೃತಿ. ಇಕ್ಕೆಲಗಳಲ್ಲಿ ಅಲಂಕಾರಿಕ ಕಂಬಗಳು, ಮೇಲೆ ಕಮಾನಿನಾಕಾರದ ತೋರಣ, ದೇವದೇವತೆಯರ ಶಿಲ್ಪಗಳು ಇತ್ಯಾದಿ ಇನ್ನೂ ಅನೇಕ ಅಲಂಕಾರಿಕ ಕೆತ್ತನೆಗಳನ್ನು ಹೇರಳವಾಗಿ ಹೊಂದಿದೆ.

	ದೇವಾಲಯದ ಭಿತ್ತಿಯ ಹೊರಮೈ ಬೆರಗುಗೊಳಿಸುವಷ್ಟು ಸುಂದರವಾದ, ವೈವಿಧ್ಯಮಯವಾದ ಕೆತ್ತನೆಗಳಿಂದ ಕೂಡಿದೆ. ನೈಜತೆಯ ಬೃಹದಾಕಾರದ ಶಿಲ್ಪಗಳು, ಕುಬ್ಜಶಿಲ್ಪಗಳು, ವಿವಿಧ ಪ್ರಮಾಣದ ವಾಸ್ತು ಚೌಕಟ್ಟಿನಲ್ಲಿ ಕೆತ್ತಲ್ಪಟ್ಟಿವೆ. ಹೆಚ್ಚಿನ ಪ್ರಾಧಾನ್ಯತೆ ಇರುವುದು ಸ್ತ್ರೀ ಶಿಲ್ಪಕ್ಕೆ. ದೇವಾಲಯದ ಕೈಪಿಡಿ ಗೋಡೆ ನಾಶವಾಗಿದ್ದರೂ ಅಳಿದುಳಿದಿರುವ ಅವಶೇಷಗಳಿಂದ ಈ ಭಾಗ ಸುಂದರ ಸಾಲು ಶಿಲ್ಪಗಳಿಂದಲೂ ಸಣ್ಣಸಣ್ಣ ಶಿಖರಗಳಿಂದಲೂ ಶೋಭಿಸುತ್ತಿತ್ತೆಂದು ಹೇಳಬಹುದು. ದೇವಾಲಯದ ಪಾಶ್ರ್ವದ ಎರಡೂ ಗೋಡೆಗಳಲ್ಲಿ ಎರಡೆರಡು ಹಾಗೂ ಹಿಂಭಾಗದ ಗೋಡೆಯಲ್ಲಿ ಒಂದು ದೊಡ್ಡದಾದ ಕಿಟಕಿ ಇವೆ. ವಾಸ್ತುಶಿಲ್ಪದ ಚೌಕಟ್ಟಿನಲ್ಲಿ ಹಾಗೂ ಕಟ್ಟಡದ ಮುಂಬಣಿಗಳಲ್ಲಿ ಗೋಡೆಗೆ ಹೊಂದಿಸಲಾಗಿರುವ ಈ ಕಿಟಕಿಗಳು ಭಿತ್ತಿಗೆ ವೈವಿಧ್ಯವನ್ನೂ ಆಲಯದ ಒಳಭಾಗಕ್ಕೆ ಮಂದ ಬೆಳಕನ್ನೂ ನೀಡುವಲ್ಲಿ ಯಶಸ್ವಿಯಾಗಿವೆ. ಗೂಢಮಂಟಪದ ಮಧ್ಯದ ಅಂಕಣದಲ್ಲಿ ಸುಂದರವಾದ ಭುವನೇಶ್ವರಿ ಇದೆ. ಈ ಮಂಟಪದ ಒಳಗೋಡೆಯಲ್ಲಿ ಅಲ್ಲಲ್ಲಿ ದೇವಕೋಷ್ಠಗಳಿದ್ದು ಆಕರ್ಷಕವಾದ ಸೂರ್ಯ ಶಿಲ್ಪಗಳನ್ನು ಇವುಗಳಲ್ಲಿ ಕಾಣಬಹುದು. ಉಳಿದ ಗೋಡೆಯ ಭಾಗ ಸರಳವಾಗಿದೆ. ಗೂಢಮಂಟಪದಿಂದ ಗರ್ಭಗೃಹಕ್ಕೆ ಇರುವ ಪ್ರವೇಶದ್ವಾರ ಸುಂದರ ಸೂಕ್ಷ್ಮಕೆತ್ತನೆಗಳಿಂದ ಕೂಡಿದೆ. ಚೌಕಟ್ಟಾದ ಗರ್ಭಗೃಹ ಈಗ ಖಾಲಿಯಾಗಿದ್ದು ಗರ್ಭಗೃಹದ ಮೇಲಿನ ಶಿಖರ ಸಂಪೂರ್ಣ ನಾಶವಾಗಿದೆ.

	ಗುಜರಾತೀ ಶೈಲಿಯ ಸರ್ವಸತ್ವಗಳನ್ನೂ ಮೈಗೂಡಿಸಿಕೊಂಡು ನಿರ್ಮಿತವಾಗಿರುವ ಈ ದೇವಾಲಯದಲ್ಲಿ ಅಲಂಕರಣ ಶಿಲ್ಪಗಳು ವಿಪುಲ; ವೈವಿಧ್ಯ ಕಡಿಮೆ. ಆದರೆ ಸಾಲುಶಿಲ್ಪಗಳು ಗಮನಸೆಳೆಯುತ್ತವೆ; ವೈವಿಧ್ಯವೂ ಹೆಚ್ಚು, ಬೇಟೆಯ ಚಿತ್ರಗಳು, ಯುದ್ಧದ ಸನ್ನಿವೇಶಗಳು, ಒಂಟೆಯ ಸವಾರಿ, ಆನೆಯ ಸಾಲು, ಕುದುರೆಯ ಸಾಲು, ನೃತ್ಯವಾದ್ಯಪಟುಗಳ ಸಾಲು-ಇವು ಸುಂದರವಾಗಿ ಮೂಡಿವೆ; ಆಶ್ಚರ್ಯವನ್ನೂ ವಿಸ್ಮಯವನ್ನೂ ಮೂಡಿಸುವಂತೆ ಜೀವಂತವಾಗಿವೆ. ಇಲ್ಲಿ ಉಪಯೋಗವಾಗಿರುವ ಕಲ್ಲು ಸ್ಪಂಜಿನಂತಹ ರಚನೆಯನ್ನು ಹೊಂದಿರುವುದರಿಂದ ಸೂಕ್ಷ್ಮ ವಿವರಣೆಯನ್ನು ನೀಡುವಲ್ಲಿ ಶಿಲ್ಪಿಗೆ ಸ್ವಲ್ಪ ತೊಡಕುಂಟಾಗಿದ್ದರೂ ಒಟ್ಟಿನಲ್ಲಿ ಈ ಶಿಲ್ಪಗಳು ನಯನ ಮನೋಹರವಾಗಿವೆ. ದೇವಾಲಯಗಳಲ್ಲಿ ಒಂಟೆಯ ಶಿಲ್ಪಗಳು ಕಂಡುಬರುವುದು ವಿರಳ. ಇಲ್ಲಿ ಅನೇಕ ಒಂಟೆಯ ಶಿಲ್ಪಗಳು ಕಾಣಬರುತ್ತವೆ. ಇಲ್ಲಿಯ ಶಿಲ್ಪಗಳ ಮತ್ತೊಂದು ವಿಶೇಷವೆಂದರೆ ಕೆಲವು ಶಿಲ್ಪಗಳಲ್ಲಿ ಪರ್ಷಿಯನ್ ಜನಾಂಗದವರೆಂದು ಗುರುತಿಸಬಹುದಾದ ಪುರುಷರ ಚಿತ್ರಗಳಿರುವುದು. ಈ ಪುರುಷರು ಸಿಂಹದೊಂದಿಗೆ ಹೋರಾಡುತ್ತಿರುವಂತೆ ಚಿತ್ರಿಸಲಾಗಿದೆ. ಈಗ ದೇವಾಲಯದ ಮೂಲ ವಿಗ್ರಹ ಕಾಣೆಯಾಗಿದ್ದರೂ ಸೂರ್ಯಶಿಲ್ಪಗಳಿಗೆ ಕೊರತೆ ಇಲ್ಲ. ದೇವಾಲಯದ ಹೊರ ಹಾಗೂ ಒಳ ಗೋಡೆಯ ಕೋಷ್ಠಗಳಲ್ಲಿ ಅನೇಕ ಸೂರ್ಯವಿಗ್ರಹಗಳಿವೆ. ಶಿಲ್ಪಶಾಸ್ತ್ರಾನುಸಾರ ನಿರೂಪಿಸಲಾದ ಈ ಶಿಲ್ಪಗಳೆಲ್ಲ ಸಮಭಂಗದಲ್ಲಿವೆ. ಎರಡೂ ಕೈಗಳಲ್ಲಿ ಒಂದೊಂದು ಕಮಲಪುಷ್ಪ, ಹಿತಮಿತವಾದ ಅಲಂಕರಣ, ಸುಂದರ ಕಿರೀಟ, ದುಂಡಾದ ಮುಖ ಗಂಭೀರ ಮುಖಮುದ್ರೆ-ಈ ವಿಗ್ರಹಗಳ ಕೆಲವು ಪ್ರಮುಖ ಲಕ್ಷಣಗಳು.
(ಎಂ.ಎಸ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ